ಅದೇನೂ ದಶಕಗಳ ಹಿಂದಿನ ಅನಾದಿಕಾಲವಲ್ಲ. ಹಾಗೋ ಹೀಗೋ ಎಂಟೋ ಒಂಭತ್ತೋ ವರ್ಷಗಳಾಗಿರಬಹುದು. ರೌಂಡ್ ಅಪ್ ಮಾಡಿ ಹತ್ತೇ ಎಂದಿಟ್ಟುಕೊಳ್ಳೋಣ. ನಾನಾಗ ಹೈಸ್ಕೂಲು ಹಂತದಲ್ಲಿದ್ದೆ. ಕ್ರಿಕೆಟ್ ಎಂದರೆ ತಲೆಯೇರಿದ ಭೂತದಂತಿರದಿದ್ದರೂ ಬಹು ಉತ್ಸಾಹದಿಂದ ನೋಡುತ್ತಿದ್ದಂತಹ ಸಮಯ ಅದಾಗಿತ್ತು. ಐರೋಪ್ಯ ಶೈಲಿಯ ಅಂಗ್ಲಭಾಷೆಯ ಕಾಮೆಂಟರಿ ಕನ್ನಡ ಮಾಧ್ಯಮದ ನನಗೆ ಆ ಸಮಯದಲ್ಲಿ ತೋಚದಾಗಿದ್ದರೂ ಆಟದ ಎಲ್ಲಾ ನಿಯಮಗಳು, ಕ್ರಿಕೆಟ್ ಪದಗುಚ್ಛಗಳು ನಾಲಗೆಯ ತುದಿಯಲ್ಲಿ ನಲಿದಾಡುತ್ತಿದ್ದವು. ಸಭ್ಯರ ಆಟ ಎಂಬ ಕಿರೀಟ ಹೊತ್ತು ಮೆರೆಯುತ್ತಿದ್ದ ಈ ಆಟ ಪ್ರತೀ ಗಲ್ಲಿಯ ಮಕ್ಕಳಿಗೂ, ಯುವಕರಿಗೂ, ಹಿರಿಯರಿಗೂ ಪ್ರಿಯವಾಗಿತ್ತು. ಈಗ ನಾನು ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ. ಈಗಲೂ ಕ್ರಿಕೆಟ್ ಎಲ್ಲರ ಬಾಯಲ್ಲೂ ಜಂಕ್ಫುಡ್ನಂತೆ ಹರಿದಾಡುತ್ತಿದೆ. ಹೊಸರೂಪಗಳನ್ನು ಮೈಗೂಡಿಸಿ ಮುಂದಿನ ವರ್ಷಗಳಲ್ಲಿ ಅವತರಿಸಿ ಬಂದ ಈ ಆಟದ ಜನಪ್ರಿಯತೆ ಕಿಂಚಿತ್ತೂ ಕುಗ್ಗಿಲ್ಲ. ಆದರೆ ಈಗ ಸಚಿನ್ ಎಂಬ ಹೆಸರು ಎಲ್ಲೋ ದೇವರಾಗಿ ಉಳಿದುಹೋಗಿದ್ದರೂ ಕ್ರಿಕೆಟ್ ಧರ್ಮವಾಗಿ ಉಳಿದಿಲ್ಲ ಎಂದು ನಿಸ್ಸಂಶಯವಾಗಿ ಹೇಳಬಹುದು. ಕೆಲವೇ ವರ್ಷಗಳಲ್ಲಿ ಕಣ್ಣಮುಂದೆ ನಡೆದ ಇಂಥಾ ವೇಗದ ಬದಲಾವಣೆಗಳನ್ನು ಕಂಡರೆ ಇಂದಿಗೂ ಆಶ್ಚರ್ಯ, ಬರೆಯುವ ತವಕ.
ಸಭ್ಯರ ಆಟ ಎಂಬ ಹಣೆಪಟ್ಟಿ ಹೊತ್ತಿದ್ದರೂ ಕ್ರಿಕೆಟ್ ವಿವಾದಗಳಿಂದ ಮಾರುದೂರವೇನೂ ಇರಲಿಲ್ಲ. ಶೇನ್ ವಾರ್ನ್ ರ ಖಾಸಗಿ ಜೀವನ, ಆಸ್ಟ್ರೇಲಿಯನ್ನರ ಪುಂಡತನ, ಪಾಕಿಸ್ತಾನಿ ಆಟಗಾರರ ಅತಿರೇಕದ ವರ್ತನೆ, ಅಂಪೈರ್ಗಳ ವಿವಾದಾತ್ಮಕ ತೀರ್ಪುಗಳು ಹೀಗೆ ಒಂದಲ್ಲಾ ಒಂದು ವಿಷಯದಲ್ಲಿ ಕ್ರಿಕೆಟ್ ಎಂಬುದು ಮಾಧ್ಯಮಗಳಿಗೆ ಸದಾ ಆಹಾರವಾಗಿತ್ತು ಮತ್ತು ಈಗಲೂ ಆಹಾರವಾಗಿಯೇ ಮುಂದುವರಿದಿದೆ. ಈ ವರ್ಷವಂತೂ ಪಾಕ್ ಆಟಗಾರ ಶಾಹಿದ್ ಆಫ್ರಿದಿ ತನ್ನನ್ನು ಕ್ಯಾಮೆರಾಗಳು ಸೆರೆಹಿಡಿಯುತ್ತಿವೆಯೆಂಬ ಹೆದರಿಕೆಯೂ ಇಲ್ಲದೆ ಚೆಂಡನ್ನು ರಾಜಾರೋಷವಾಗಿ ಸೇಬುಹಣ್ಣಿನಂತೆ ಕಚ್ಚಿ ಚೆಂಡನ್ನು ವಿರೂಪಗೊಳಿಸಲು ಪ್ರಯತ್ನಿಸಿದರು. ಭಾರತ ತನ್ನ ಹಣದ ಬಲದಿಂದ ವಿಶ್ವಕ್ರಿಕೆಟ್ನ ಆಡಳಿತ ಯಂತ್ರವನ್ನೇ ತನ್ನ ತೆಕ್ಕೆಗೆ ಹಾಕಿಕೊಂಡು ಐಸಿಸಿ ಎಂಬ ಉತ್ಸವಮೂರ್ತಿಯನ್ನು ತನಗೆ ಬೇಕಾದಂತೆ ಕುಣಿಸುತ್ತಿರುವುದು ಈಗ ಹಳೆಯ ಸಂಗತಿ. ನಿಜವಾಗಿ ಹೇಳಬೇಕಾದರೆ ಬರೋಬ್ಬರಿ ನೂರು ಕೋಟಿ ಅಭಿಮಾನಿಗಳನ್ನು ಹೊಂದಿರುವ ಭಾರತವೇ ಈ ಆಟಕ್ಕೆ ವಿಶ್ವಮಟ್ಟದಲ್ಲಿ ಸ್ಟಾರ್ಗಿರಿಯನ್ನು ತಂದುಕೊಟ್ಟಿತು. ಸಿನಿಮಾ ಮತ್ತು ಕಾರ್ಪೊರೇಟ್ ಎಂಬ ಮಸಾಲೆಗಳನ್ನು ಬೆರೆಸಿ ಕ್ರೀಡೆಯನ್ನು ವಾಣಿಜ್ಯೀಕರಣಗೊಳಿಸಿತು. ಜಗಮೋಹನ್ ದಾಲ್ಮಿಯಾ, ಶರದ್ ಪವಾರ್ ಮುಂತಾದ ಘಟಾನುಘಟಿಗಳು ಇದಕ್ಕೆ ಮುನ್ನುಡಿಯನ್ನು ಬರೆದರು ಎಂದರೂ ತಪ್ಪಾಗಲಾರದು. ಆದರೆ ಇದೇ ಭಾರತ ಕ್ರಿಕೆಟ್ನ ಐಪಿಎಲ್ ಆವೃತ್ತಿಯನ್ನೂ ಆರಂಭಿಸಿ ಕ್ರಿಕೆಟ್ ಅನ್ನು ಹರಾಜಿಗಿಟ್ಟಿತು. ಕಾಂಚಾಣದ ವಾಸನೆಯನ್ನು ತೋರಿಸಿ, ಆಟಗಾರರು ದೇಶ ಭಾಷೆಗಳ ಎಲ್ಲೆಯನ್ನು ಮೀರಿ ತರಕಾರಿಗಳಂತೆ ಬಿಕರಿಯಾದರು. ಎಲ್ಲೋ ನಷ್ಟದಲ್ಲಿ ಮುಳುಗಿಹೋಗಿದ್ದ ಲಲಿತ್ ಮೋದಿಯನ್ನೂ ಒಳಗೊಂಡು ಆಟಗಾರರೂ, ಉದ್ಯಮಿಗಳೂ, ಭೂಗತಲೋಕಕ್ಕೆ ಆಗತಾನೇ ಕಾಲಿರಿಸಿದವರೂ, ಹೀಗೆ ಎಲ್ಲರೂ ರಾತ್ರೋರಾತ್ರಿ ಶ್ರೀಮಂತರಾದರು. ಯಾವುದೇ ಕ್ರೀಡೆಯಾಗಲಿ ಇಂಥಾ ವೇಗದಲ್ಲಿ ಈ ಮಟ್ಟಕ್ಕೆ ತಲುಪಿದ ಜಾಗತಿಕ ಉದಾಹರಣೆಯಿರಲಿಕ್ಕಿಲ್ಲ. ಕ್ರಿಕೆಟ್ನ ಮಟ್ಟಿಗೆ ಈ ಬೆಳವಣಿಗೆ ಹಿತಕಾರಿಯಾದುದಲ್ಲ ಮತ್ತು ಆತಂಕಕಾರಿ ವಿಷಯವೆಂದರೆ ಇದರಿಂದಾಗಿ ಈಗ ಕ್ರಿಕೆಟ್, ಕ್ರಿಕೆಟ್ ಆಗಿ ಉಳಿದಿಲ್ಲ.
ಕೆಲವು ವರ್ಷಗಳ ಹಿಂದೆ ಹ್ಯಾನ್ಸಿ ಕ್ರೋನಿಯೆ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದೊಡನೆಯೇ ಇಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಗುಮಾನಿ ಹರಡಲು ಆರಂಭವಾಗಿತ್ತು. ಅದರಲ್ಲೂ ತಪ್ಪೊಪ್ಪಿಕೊಂಡ ಕೆಲಸಮಯದ ನಂತರ ಆದ ಕ್ರೋನಿಯೆ ದುರಂತ ಮರಣ, ಕಪಿಲ್ ದೇವ್ ಕಣ್ಣೀರು, ಜಡೇಜಾ ಅಮಾನತು ಎಲ್ಲಾ ಕ್ರಿಕೆಟ್ ಜಗತ್ತಿನಲ್ಲಿ ತೀವ್ರ ಸಂಚಲನವನ್ನು ಮೂಡಿಸಿದವು. ಮ್ಯಾಚ್ ಫಿಕ್ಸಿಂಗ್ ಪ್ರಕರಣದಿಂದ ಕ್ರಿಕೆಟ್ ತನ್ನ ಅಭಿಮಾನಿಗಳ ಒಂದು ಬಳಗವನ್ನೇ ಕಳೆದುಕೊಂಡಿತು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಕೆಲ ವರ್ಷಗಳ ನಂತರ ನಡೆದ ಬಾಬ್ ವೂಲ್ಮರ್ ಸಂಶಯಾಸ್ಪದ ಕೊಲೆ ಕೊನೆಗೂ ತನಿಖೆಯಲ್ಲಿ ಯಶಸ್ಸಿನ ದಡವನ್ನು ಮುಟ್ಟುವಲ್ಲಿ ವಿಫಲವಾಯಿತು. ಆದರೆ ಈಗ ಇವೆಲ್ಲವನ್ನೂ ಮೀರಿಸಿ ಮೋದಿಯ ಮೋಡಿ "ಐಪಿಎಲ್" ಕ್ರಿಕೆಟ್ನ ಪ್ರತಿಷ್ಠೆಯನ್ನು ಗಾಳಿಗೆ ತೂರಿಹಾಕಿದೆ. ಕ್ರೀಡೆಯೊಂದು ಜೂಜಿನ ಅಡ್ಡೆಯಾಗಿ ಬೆಳೆಯಲು ಇದೊಂದೇ ಕಾರಣವಾಯಿತು. ಪ್ರಾಯಶಃ ಶಶಿ ತರೂರ್ ಎಂಬ ಪ್ರತಿಭಾವಂತ ಯುವ ನಾಯಕ ಈ ಕೂಪದಲ್ಲಿ ಸಿಕ್ಕಿಹಾಕಿಕೊಳ್ಳದೇ ಹೋಗಿರುತ್ತಿದ್ದಲ್ಲಿ ಸರಕಾರ ಕೂಡ ಇದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ರಾಹುಲ್ ಗಾಂಧಿಯನ್ನು ಹೊರತುಪಡಿಸಿದರೆ ತರೂರ್ ಭವಿಷ್ಯದ ಕಾಂಗ್ರೆಸ್ ಯುವನಾಯಕರೆಂದೇ ಬಿಂಬಿತರಾಗಿದ್ದರು. ಮಾಧ್ಯಮದಲ್ಲಿ ಅಧಿಕಪ್ರಸಂಗಿತನದ ಹೇಳಿಕೆಗಳನ್ನು ಆಗಾಗ್ಗೆ ಕೊಡುತ್ತಾ ಯುಪಿಎ ಬಳಗಕ್ಕೆ ಚಿಂತೆಗೀಡುಮಾಡಿದ್ದ ಇವರಿಗೆ ಐಪಿಎಲ್ ತಲೆದಂಡ ಕೊಡುವಂತೆ ಮಾಡಿತು. ಶಶಿ ತರೂರ್ ವಿಶ್ವ ಸಂಸ್ಥೆಯ ಉಪಮಹಾಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಅನುಭವಿ. ಮಹಾಕಾರ್ಯದರ್ಶಿ ಹುದ್ದೆಯ ಚುನಾವಣೆಗೆ ನಿಂತು ಅವರು ಪರಾಭವ ಹೊಂದಿದ್ದರು. ತನ್ನ ಪಂಚತಾರಾ ಜೀವನಶೈಲಿಯ ಜೊತೆಗೆ ಚಿಂತಕರೂ, ಲೇಖಕರೂ, ಪ್ರತಿಭಾವಂತ ವಾಗ್ಮಿಯೂ ಆಗಿದ್ದ ತರೂರ್ ತಮ್ಮ ಹುದ್ದೆಯೊಂದಿಗೆ ಕೊಚ್ಚಿ ತಂಡದ ಮಾಲಕತ್ವದ ವಿಚಾರದಲ್ಲಿ ತನ್ನ ವಿವಾದಾತ್ಮಕ ಒಡನಾಡಿ ಸುನಂದಾ ಪುಷ್ಕರ್ಗೆ ಬಿಟ್ಟಿ ಲಾಭವನ್ನು ಕೊಡಿಸಿ ತನ್ನ ಇಮೇಜ್ ಅನ್ನೂ ಕಳೆದುಕೊಂಡರು. ಹಲವು ಸಾವಿರ ಕೋಟಿಗೂ ಮೀರಿದ ಈ ಹಣದ ಹೊಳೆಯ ಮೂಲ ಹುಡುಕುವುದು ತರೂರ್ ಸಿಕ್ಕಿಬೀಳುವವರೆಗೂ ಕೇಂದ್ರ ಸರಕಾರಕ್ಕೆ ಬೇಡವಾಗಿತ್ತು. ಈಗ ತರೂರ್ ಅನ್ನು ಕಳೆದುಕೊಂಡ ಒತ್ತಡದ ಸರಕಾರ ಜೊತೆಗೇ ಸಿಬಿಐ ಅನ್ನು ಮೋದಿ ಹಿಂದೆ ಛೂಬಿಟ್ಟಿದೆ. ಸೋನಿ ಎಂಟರ್ಟೈನ್ಮೆಂಟ್ ಪ್ರಸಾರಕ್ಕಾಗಿ ಪಡೆದುಕೊಂಡ ಮೊತ್ತ, ಪ್ರತೀ ತಂಡದ ಮಾಲೀಕರು ಗಿಟ್ಟಿಸಿದ ಹಣ, ಲೇಟ್ನೈಟ್ ಪಾರ್ಟಿ ಮುಂತಾದವುಗಳಿಗೆ ಪೋಲಾದ ಹಣ ಮುಂದೆ ದೆಹಲಿಯಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ಅಂದಾಜು ವೆಚ್ಚದ ಹತ್ತುಪಟ್ಟರಷ್ಟಿವೆ ಮತ್ತು ಇದರಿಂದ ಇಲ್ಲಿ ಹರಿದ ಕಪ್ಪು ಹಣದ ಪ್ರಮಾಣವನ್ನು ಊಹಿಸಬಹುದು. ವಿಪರ್ಯಾಸವೆಂದರೆ ಇಷ್ಟಾಗಿಯೂ ಐಪಿಎಲ್ ನಾಲ್ಕನೇ ಆವೃತ್ತಿಗೆ ತಂಡಗಳನ್ನು ಖರೀದಿಸಲು ಕಸರತ್ತು ಶುರುವಾಗಿದೆ ಮತ್ತು ಸರಕಾರವು ಕಾಟಾಚಾರದ ಒಂದು ತನಿಖಾ ಮಂಡಳಿಯನ್ನು ನೇಮಿಸಿ ತನ್ನ ಕೈತೊಳೆದುಕೊಂಡಿದೆ.
ಕ್ರಿಕೆಟ್ನ ಗಾಂಭೀರ್ಯತೆ ಕುಸಿಯುವುದಕ್ಕೆ ಬಿಡುವಿಲ್ಲದ ವೇಳಾಪಟ್ಟಿಯೂ ತಕ್ಕಮಟ್ಟಿಗೆ ಕಾರಣವಾಗಿದೆ. ಈ ವರ್ಷದ ಕ್ರಿಕೆಟ್ ವೇಳಾಪಟ್ಟಿಯನ್ನೇ ನೋಡುವುದಾದರೆ ಐಪಿಎಲ್ ಮುಗಿದು ಉಸಿರು ಬಿಡುವಷ್ಟರ ಮೊದಲೇ ಐಸಿಸಿ ಟ್ವೆಂಟಿ-ಟ್ವೆಂಟಿ ವಿಶ್ವಕಪ್ ಆರಂಭವಾಯಿತು. ಇದಾದ ಸ್ವಲ್ಪ ದಿನಗಳಲ್ಲೇ ಭಾರತ-ಜಿಂಬಾಬ್ವ್ವೆ-ಶ್ರೀಲಂಕಾ ತ್ರಿಕೋನ ಸರಣಿ ಆರಂಭವಾಗಿದೆ. ಈ ಸರಣಿಯ ಬೆನ್ನಿಗೇ ಏಷ್ಯಾಕಪ್, ಹೊನಲು ಬೆಳಕಿನ ಟೆಸ್ಟ್ ಆಟದ ಪ್ರಯೋಗ ಮುಂತಾದವುಗಳು ಕೂಡ ಎದುರು ನೋಡುತ್ತಿವೆ. ಆಟಗಾರರೂ ಇವೆಲ್ಲದರಿಂದ ತಮ್ಮ ಫಾರ್ಮ್ ನ್ನು ಕಳೆದುಕೊಂಡು ತಮ್ಮ ದೇಸಿ ಕ್ರಿಕೆಟ್ನಲ್ಲಿ ಕಳಪೆ ಪ್ರದರ್ಶನವನ್ನು ತೋರಿ ಮಂಡಳಿಯ, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಐಸಿಸಿ ಟ್ವೆಂಟಿ-ಟ್ವೆಂಟಿ ವಿಶ್ವಕಪ್ನಲ್ಲಿ ಮೊದಲ ಸುತ್ತಿನಲ್ಲೇ ಹೀನಾಯ ಸೋಲುಂಡು ಹೊರನಡೆದ ಬಳಿಕ ನಾಯಕ ಧೋನಿ ಪತ್ರಿಕಾಗೋಷ್ಠಿಯಲ್ಲಿ ಲೇಟ್ನೈಟ್ ಪಾರ್ಟಿಗಳಿಂದ ಏಕಾಗ್ರತೆಗೆ ಭಂಗವಾಯಿತು ಎಂಬ ಬಾಲಿಶ ಹೇಳಿಕೆಯನ್ನು ನೀಡಿ ಅನಗತ್ಯ ವಿವಾದಕ್ಕೆ ಗುರಿಯಾದರು. ಐಪಿಎಲ್ ಲೇಟ್ನೈಟ್ ಪಾರ್ಟಿ ಸಂಯೋಜಕರು ಹೇಳುವ ಪ್ರಕಾರ ಈ ಮನರಂಜನೆಯ ಹೆಣ್ಣು-ಹೆಂಡದ ಪಾರ್ಟಿಗಳನ್ನು ಎಲ್ಲಾ ತಂಡದ ಒಪ್ಪಿಗೆಯ ಮೇರೆಗೇ ಆಯೋಜಿಸಲಾಗುತ್ತದೆ ಮತ್ತು ಆಯೋಜಿಸಿದ ಎಲ್ಲಾ ಪಾರ್ಟಿಗಳಲ್ಲಿ ಆಟಗಾರರೆಲ್ಲರೂ ಕಡ್ಡಾಯವಾಗಿ ಭಾಗವಹಿಸಲೇಬೇಕೆಂಬ ಯಾವ ನಿಯಮವೂ ಇಲ್ಲ. ಭಾರತದ ಆರು ಆಟಗಾರರು ಈಗಾಗಲೇ ಪಬ್ಬುಗಳಲ್ಲಿ ತಮ್ಮ ಪರಾಕ್ರಮವನ್ನು ತೋರಿ ತಾವೂ ಕಾಂಗರೂ ಪಡೆಗಿಂತ ಪುಂಡತನದಲ್ಲಿ ಕಮ್ಮಿಯೇನಿಲ್ಲ ಎಂಬುದನ್ನು ತೋರಿಸಿಕೊಟ್ಟರು. ಈ ಆಟಗಾರರೆಲ್ಲರೂ ನಿಷೇಧ ಬೆದರಿಕೆಯ ನಂತರ ಕೊನೆಯ ಅಸ್ತ್ರವಾಗಿ ಮಂಡಳಿಯ ಬಳಿ ಕ್ಷಮೆಯಾಚಿಸಿದರೇ ಹೊರತು ಇದರಲ್ಲಿ ಸಮರ್ಥಿಸಿಕೊಳ್ಳುವಂಥದ್ದೇನೂ ಇಲ್ಲ.
ಭೂರಿಭೋಜನವನ್ನು ದಿನವೂ ಬಡಿಸಿದರೆ ತಿಂದು ತಿಂದು ನಾಲಗೆಯು ರುಚಿ ಕಳೆದುಕೊಂಡು ಮೃಷ್ಟಾನ್ನವೂ ರುಚಿಸದಂತೆ ವರ್ಷವಿಡೀ ನಡೆಯವ ಸರಣಿ ಪಂದ್ಯಗಳು, ವಾಣಿಜ್ಯ ಕೇಂದ್ರಿತ ಆವೃತ್ತಿಗಳು ಹಿಂದಿನ ದಿನಗಳಲ್ಲಿದ್ದ ನೈಜ ಆಟವನ್ನು ಸವಿಯುವ ಅಭಿರುಚಿಯನ್ನು ದೂರಮಾಡಿವೆ. ಕ್ರಿಕೆಟ್ನ ಶಾಸ್ತ್ರೀಯ ಸೊಗಡಾದ ಟೆಸ್ಟ್ ಮ್ಯಾಚ್ಗಳು ಮಿನಿ-ಮಿನಿ ಗ್ಲ್ಯಾಮರ್ ಕ್ರಿಕೆಟ್ಗಳ ಅಬ್ಬರದಲ್ಲಿ ಅನಾಥವಾಗಿವೆ. ಆಟದ ಅವಧಿ ದಿನೇ ದಿನೇ ಸಣ್ಣದಾದಷ್ಟು ಒಳಗಿನ ಕಪ್ಪುಹಣ, ಮೋಸದಾಟದ ದಂಧೆಗಳು ರಾಕ್ಷಸಗಾತ್ರ ಪಡೆದುಕೊಳ್ಳುತ್ತಿವೆ. ಸರಕಾರ ಇನ್ನಾದರೂ ಎಚ್ಚೆತ್ತು ಈ ಐಪಿಎಲ್ ಎಂಬ ರಾಯಲ್ ಹೆಸರನ್ನು ಹೊತ್ತು ಹಾಡಹಗಲೇ ಕಪ್ಪುಹಣವನ್ನು ಮಾರುಕಟ್ಟೆಯಲ್ಲಿ ಹರಿದಾಡಿಸುವ ಆವೃತ್ತಿಗಳನ್ನು ತಡೆಹಿಡಿಯಬೇಕಾಗಿದೆ. ಇದಕ್ಕೆ ತರೂರ್ರಂತಹ ಇನ್ನೊಬ್ಬ ಆಲ್ರೌಂಡರ್ನ ವಿಕೆಟ್ ಪತನವಾದರೂ ಚಿಂತೆಯಿಲ್ಲ. ರಾಜಕಾರಣಿ ಮುಂದಿನ ಚುನಾವಣೆಯ ಬಗ್ಗೆ ಮಾತ್ರ ಚಿಂತಿಸುತ್ತಾನಂತೆ ಆದರೆ ಒಬ್ಬ ಮುತ್ಸದ್ದಿ ಮುಂದಿನ ಜನಾಂಗದ ಬಗ್ಗೆಯೇ ಸದಾ ಚಿಂತಿಸುತ್ತಾನಂತೆ. ಯುಪಿಎಯ ನಾಯಕರುಗಳು ಇವೆರಡರಲ್ಲಿ ಯಾವ ವಿಧವನ್ನು ಪ್ರತಿನಿಧಿಸುತ್ತಾರೆ ಎಂಬುದನ್ನು ಇನ್ನು ಕಾಲವೇ ಹೇಳಬೇಕು....!!!!!!
on a funny note.. i don believe tendulkar as a god..
ReplyDelete